ಜನಮನದ ಹೋರಾಟಕ್ಕೆ ಜನ ಹೋರಾಟ..
"ಈ ಲೇಖನವನ್ನು ಸ್ವಲ್ಪ ಎಡಿಟ್ ಮಾಡಿ ಪ್ರಕಟಿಸಲು ಅಡ್ಡಿಯಿಲ್ಲ..ಆದರೆ ಚಿತ್ರರಂಗದಲ್ಲಿ ಬೆಳೆಯುವ ಹಂತದಲ್ಲಿರುವ ಒಬ್ಬ ಯುವ ಸಂಗೀತಗಾರರಾದ ನಿಮಗೆ ಇದರಿಂದ ಮಾರಕವಾಗಬಹುದು. ಪತ್ರಿಕಾರಂಗದ ಕೆಂಗಣ್ಣಿಗೆ ಗುರಿಯಾಗಬಹುದು....ಯೋಚಿಸಿ.." ಎಂದು ನನ್ನ ಹಿತವನ್ನೇ ಬಯಸುವ ಪತ್ರಕರ್ತ ಮಿತ್ರರೊಬ್ಬರು ನನಗೆ ಹಿತನುಡಿಯನ್ನು ನೀಡಿದ್ದರು. ಅವರ ಮಾತಿನ ಹಿಂದೆ ಸದುದ್ದೇಶವೇ ಇತ್ತು. ಅದನ್ನು ಪ್ರಕಟಿಸಲು ಹಿಂಜರಿದ ಅವರಿಗೆ ಆ ಕ್ಷಣದಲ್ಲಿ ನಾನೂ ಅಹುದೆಂದು ದನಿಗೂಡಿಸಿದ್ದೆ.
ಆದರೆ ನಾನು ಇಂದಿನ ಸಿನಿಮಾ ಪತ್ರಿಕೋದ್ಯಮದ ಸ್ಥಿತಿಗತಿಯ ಬಗ್ಗೆ ಮುಲಾಜಿಲ್ಲದೆ ಮಂಡಿಸಿದ್ದ ವಿಚಾರ ಸಮಾಜದಲ್ಲಿ ಒಂದಷ್ಟು ಮಂದಿಗೆ ಹೆದರಿ ಮಂಡಿಯೂರಿ ಕುಳಿತುಕೊಳ್ಳುವಂತಾಗಲು ಇಚ್ಛೆ ಪಡಲಿಲ್ಲ..ನನಗೆ ಮನಸ್ಸೂ ಬರಲಿಲ್ಲ. ಮನಸ್ಸು ಮಾಡಿ ಇನ್ನೊಮ್ಮೆ ಅದೇ ಲೇಖನವನ್ನು ನಾನೇ ಎಡಿಟ್ ಮಾಡಿ ಮತ್ತೆ ಅದೇ ಪತ್ರಿಕೆಗೆ ಕಳಿಸಿದೆ. ತಿಂಗಳು ಕಳೆದರೂ ನಿರುತ್ತರ ! ವಿಚಾರ ತಂಗಳಾಗುವುದರ ಒಳಗೆ ರಾಜ್ಯದ ಹಲವಾರು ಪ್ರಸಿದ್ಧ ದೈನಿಕ ಪತ್ರಿಕೆಗಳಿಗೆ ಈ-ಮೇಲ್‌ನಲ್ಲೇ ಓಡಾಡಿಸಿದೆ. ಎಲ್ಲಾ ಪತ್ರಿಕೆಗಳಿಂದಲೂ ಒಂದೇ ಉತ್ತರ. ಇದನ್ನು ಪ್ರಕಟಿಸಲು ಸಾಧ್ಯವಿಲ್ಲ..ಎಂದು ಹೇಳುವಲ್ಲಿ ಆತುರ !
ಹೀಗೆ ಮೂರು-ನಾಲ್ಕು ತಿಂಗಳಿಂದ ಮುಕ್ತಿ ಕಾಣದೆ ನನ್ನ ಕಂಪ್ಯೂಟರ್ ಡಬ್ಬಿಯಲ್ಲೇ ನಿರ್ಜೀವವಾಗಿ ಕುಳಿತಿದ್ದ ಈ ಲೇಖನಕ್ಕೆ ಮತ್ತೆ ಮರುಜೀವ ನೀಡೋಣವೆಂದು..ಜನಹೋರಾಟ ಪತ್ರಿಕೆಗೆ ಕಳಿಸಿ ನೋಡೋಣವೆಂದು ಕಳೆದ ವಾರವಷ್ಟೇ ಕಳಿಸಿದೆ. ಆ ಪತ್ರಿಕೆಯ ಪ್ರಕಾಶಕ-ಸಂಪಾದಕ ಕಳೆದ ಹಲವಾರು ವರ್ಷಗಳಿಂದ "ಹಾಯ್ ಬೆಂಗಳೂರು" ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶೃಂಗೇಶ್ ನೇರವಾದಿ ನಿಷ್ಟೂರವಾದಿಯೆಂದು ಕೇಳಿದ್ದೆ.
ಚಿಂತನಾರ್ಹವಾಗಿದ್ದ ಈ ಲೇಖನದ ಆಳ-ಅಗಲವನ್ನು ಗಮನಿಸಿ..ಸಾಧಕ-ಬಾಧಕಗಳನ್ನು ಗುರುತಿಸಿ..ಜನಮನದ ಹೋರಾಟವನ್ನು ಗೌರವಿಸಿ..ತಮ್ಮ ಜನ ಹೋರಾಟ ಪತ್ರಿಕೆಯಲ್ಲಿ ದಿನಾಂಕ ೨೭-೩-೨೦೧೨ರಂದು ಪ್ರಕಟಿಸಿದ್ದಾರೆ.
ಪತ್ರಿಕಾರಂಗದ ತಪ್ಪು-ಒಪ್ಪುಗಳನ್ನು ಬರೆದರೆ ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸಲು ಹಿಂಜರಿಯುವ ಈ ಕಾಲದಲ್ಲಿ ಶೃಂಗೇಶ್ ತಮ್ಮದೇ ಜನ ಹೋರಾಟ ಪತ್ರಿಕೆಯಲ್ಲಿ ಇಂಥಹ ಲೇಖನವನ್ನು ಪ್ರಕಟಿಸಿ ಬೇರೆ ಪತ್ರಿಕೆಗಳಿಗೆ ಮಾದರಿಯಾಗಿದ್ದಾರೆ ಎನ್ನಬಹುದು. ಜನರ ಹೋರಾಟಕ್ಕೆ ಜನ ಹೋರಾಟ ದಿನಪತ್ರಿಕೆ ಸದಾ ಹೀಗೆಯೇ ಸ್ಪಂದಿಸಲಿ.
ಚಿನ್ಮಯ ಎಂ.ರಾವ್ ಹೊನಗೋಡು
**********
No comments:
Post a Comment