Monday, April 30, 2012

103-DIVYAAGNI-15-5-2012-FILM AWARD CONTROVERSY ARTICLE

ಅನಗತ್ಯ ವಿವಾದ...ಕಲಾವಿದರಿಗೆ ಉಪಯೋಗವಾಗುವುದಾ? -ಚಿನ್ಮಯ ಎಂ.ರಾವ್ ಹೊನಗೋಡು ಇದಕ್ಕೇನು ಬಿಡುವೆಂಬುದೇ ಇಲ್ಲ. ಪ್ರತಿವರ್ಷ ಈ ಖಾಯಿಲೆ ಇದ್ದದ್ದೇ. ಈ ಬಾರಿ ಇದು ಗಡಿರೇಖೆ ಮೀರಿ ಸ್ವಲ್ಪ ಅತಿರೇಕಕ್ಕೆ ಹೋಗುತ್ತಿದೆಯಷ್ಟೆ. ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಯಾರ್‍ಯಾರ ಪಾಲಾಗಿದೆ ಎಂದು ಅತ್ತ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ಘೋಷಿಸುತ್ತಿದ್ದಂತೇ ಇತ್ತ ಪ್ರಶಸ್ತಿ ವಂಚಿತ ಪಡೆ ತಮ್ಮ ಕಾರ್ಯಚರಣೆಯನ್ನು ಆರಂಭಿಸಿ ವಂಚನೆಯಾಗಿದೆಯೆಂದು ಗೋಳಾಡುವುದು..ಹಳಿಯಿಲ್ಲದಂತೆ ಹಳಿದುಕೊಳ್ಳುತ್ತಾ ಪರಸ್ಪರ ಹೇಳಿಕೆಗಳ ಮೂಲಕ ಪತ್ರಿಕೆಗಳಲ್ಲಿ ತಳ್ಳಾಡಿಕೊಳ್ಳುವುದು, ಏನೋ ಮೋಸವಾಗಿದೆಯೆಂದು ಅನಗತ್ಯವಾಗಿ ಗೀಳಿಡುವುದು, ಮಾಧ್ಯಮಗಳ ಮುಂದೆ ಗೋಳಾಡುವುದು, ಮಾಧ್ಯಮಗಳು ಇದೇ ಸಮಯವೆಂದು ತಮ್ಮ ಬೇಳೆ ಬೇಯಿಸಿಕೊಳ್ಳುವುದು..ನಿನ್ನೆ ಮೊನ್ನೆ ಬಂದು ಇನ್ನೂ ಚಿತ್ರರಂಗದಲ್ಲಿ ಸರಿಯಾಗಿ ಬೆಳೆಯದವರೂ ಈ ವಿವಾದದ ಮೂಲಕ ಹೆಸರು ಮಾಡಿಕೊಂಡು ಭಾರೀ ಬೆಳೆದವರಂತೆ ಪಬ್ಲಿಕ್ಕಿನಲ್ಲಿ ಫೋಸು ಕೋಡುವುದು..ಈ ಪ್ರಹಸನಗಳಿಗೆಲ್ಲಾ ಏನನ್ನಬೇಕೋ ಅರ್ಥವಾಗುವುದಿಲ್ಲ ! ವಿವಾದ ಆರಂಭ ಎಲ್ಲಿಂದ? "ಸೂಪರ್" ಚಿತ್ರಕ್ಕೆ ಪ್ರಶಸ್ತಿ ಬಂದಿದೆ ಎಂದು ಸಹಿಸಿಕೊಳ್ಳಲಾಗದ ಕೆಲವರು ಸೀದಾ ಟಾರ್ಗೆಟ್ ಮಾಡಿದ್ದು ಆಯ್ಕೆ ಸಮಿತಿಯಲ್ಲೊಬ್ಬರಾಗಿದ್ದ ಅದರ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಮೇಲೆ. ಅಸಲಿಗೆ ಆಯ್ಕೆ ಸಮಿತಿಯ ಸದಸ್ಯರಾಗಲು ಅಶೋಕ್‌ಗೆ ಆಹ್ವಾನ ಬಂದಾಗ ಸೂಪರ್ ಚಿತ್ರದ ಛಾಯಾಗ್ರಹಣಕ್ಕಾಗಿ ತಮಗೆ ಸಿಗಬಹುದಾಗಿದ್ದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯ ಆಸೆಯನ್ನೂ ಬಲಿಕೊಟ್ಟು ತನಗೆ ಒಲಿಯ ಬಹುದಾಗಿದ್ದ ಸನ್ಮಾನವನ್ನೇ ತ್ಯಾಗ ಮಾಡಿ ಸಮಿತಿಯ ಸದಸ್ಯರಾಗಲು ಅವರು ಒಪ್ಪಿದ ಕಾರಣ ಅವರನ್ನೇ ವಿವಾದದ ಕೇಂದ್ರ ಬಿಂದುವನ್ನಾಗಿಸಿ ಅವರ ವರ್ಚಸ್ಸನ್ನೇ ಬಲಿಕೊಟ್ಟರು ! ಲಾಬಿ ಮಾಡಿದ್ದಾರೆಂದು ಅವರು ಕಾಯ್ದುಕೊಂಡು ಬಂದ ಘನತೆಗೆ ಮಸಿ ಬಳಿಯುವ ಕಾರ್ಯಕ್ರಮವನ್ನು ಹಮ್ಮಿಕೊಂಡರು! ಮಾಧ್ಯಮದವರೂ ಕಡ್ಡಿ ಗೀರಿ ಕಿಡಿ ಹತ್ತಿಸಿದ್ದರ ದುಷ್ಪರಿಣಾಮ ಇಂದು ಇಡೀ ಚಿತ್ರರಂಗವೇ ತಲೆತಗ್ಗಿಸುವಂಥಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿಜ..ನಿಜಕ್ಕೂ ಅನ್ಯಾಯವಾಗಿದ್ದಲ್ಲಿ..ಯಾರಿಗೆ...ಯಾವ ರೀತಿ...ಹೇಗೆ..ಎಲ್ಲಿ..ಯಾರಿಂದ..ಅನ್ಯಾಯವಾಗಿದೆ? ಅದಕ್ಕೆ ಅನ್ಯಾಯವೆನ್ನುತ್ತಾರಾ? ಅಥವಾ ಅದು ಅವರ ದೃಷ್ಟಿಯಲ್ಲಿ ಮಾತ್ರ ಅನ್ಯಾಯವಾ? ಅಥವಾ ಇಡೀ ಸಮಾಜದ ದೃಷ್ಟಿಯಲ್ಲಿ ಅನ್ಯಾಯವಾ? ಎಂಬುದನ್ನೆಲ್ಲಾ ಮಾದ್ಯಮದವರು ಸೆಲೆಬ್ರೆಟಿಗಳ ಅಭಿಪ್ರಾಯಗಳನ್ನು ಪ್ರಕಟಿಸುವಾಗ ಆಲೋಚಿಸಬೇಕು. ಅದು ಬಿಟ್ಟು ಪ್ರಶಸ್ತಿಯ ಆಯ್ಕೆಯಲ್ಲಿರುವ ಕಠಿಣ ನೀತಿ ನಿಯಮ, ರೀತಿ ರಿವಾಜು ಯಾವುದೂ ಗೊತ್ತಿಲ್ಲದೆ..ಅಥವಾ ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸುತ್ತಾ ಪ್ರಸಿದ್ಧಿ ಪಡೆದವರು ಮಾಧ್ಯಮಗಳ ಮುಂದೆ ಬಂದು ತಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೆಂದು ಬಾಯಿಗೆ ಬಂದಂತೆ ಮಾತನಾಡಿದರೆ..ಹಾಗೆ ಮಾತಾಡಿದ್ದನ್ನು ತಮಗೊಂದು ವಿಶೇಷ ಸುದ್ದಿಯಾಯಿತಲ್ಲ ಎಂದು ಪತ್ರಿಕೆಯವರು ಪ್ರಕಟಿಸಿದರೆ ಅದರ ಪರಿಣಾಮ ದುಷ್ಪರಿಣಾಮವಾಗುತ್ತದೆ. ನಿಯಮದ ಪ್ರಕಾರ ಆಯ್ಕೆ ಸಮಿತಿಯಲ್ಲಿರುವ ಸದಸ್ಯನಿಗೆ ಸಂಬಂಧಪಟ್ಟ ಯಾವುದೇ ಚಿತ್ರವಿದ್ದರೂ ಅದರ ಚರ್ಚೆಯಲ್ಲಿ ಆತ ಪಾಲ್ಗೊಳ್ಳುವಂತಿಲ್ಲ..ಆತ ಅದಕ್ಕೆ ಮತ ಕೂಡ ಚಲಾಯಿಸುವಂತಿಲ್ಲ. ಆ ಮತವನ್ನು ಚಲಾಯಿಸುವ ಹಕ್ಕು ಆಯ್ಕೆ ಸಮಿತಿಯ ಅಧ್ಯಕ್ಷರ ಪಾಲಾಗುತ್ತದೆ. ಅಲ್ಲಿಗೆ ಸೂಪರ್ ಚಿತ್ರಕ್ಕೂ ಇದೇ ನಿಯಮ ಅನ್ವಯವಾಗಿ ಅಶೋಕ್ ಕಶ್ಯಪ್ ಆ ಪ್ರಕಾರವಾಗಿ ನಡೆದುಕೊಂಡಿದ್ದಾರೆ. ಅಂದ ಮೆಲೆ ಅಶೋಕ್ ಮೊದಲ ಹಂತದಲ್ಲೇ ವಿವಾದಾತೀತರಾದರಲ್ಲ? ಅಷ್ಟಕ್ಕೂ ಅಂತಿಮವಾಗಿ ಯಾವುದಾದರೂ ಒಬ್ಬ ಸದಸ್ಯನಿಗೆ ಆಯ್ಕೆಯಲ್ಲಿ ಅಸಮಾಧಾನವಿದ್ದರೆ ಅಲ್ಲೇ ಆತ ಸಹಿ ಮಾಡದೆ ಅದನ್ನು ಪ್ರತಿಭಟಿಸಬಹುದಲ್ಲ? ಹಾಗೆ ಮಾಡದೆ ಹೊರಗೆ ಬಂದು ಆ ಬಗ್ಗೆ ಕಂಡ ಕಂಡವರ ಬಳಿ ಹೇಳಿಕೊಂಡು ಪತ್ರಿಕೆಗಳಲ್ಲಿ ಆಯ್ಕೆ ಸಮಿತಿಯ ಇನ್ನೊಬ್ಬರ ವಿರುದ್ಧ ಲೇಖನಗಳು ಪ್ರಕಟವಾಗುವಂತೆ ಪರೋಕ್ಷವಾಗಿ ಸಹಕಾರ ನೀಡಿದರೆ ಕೈಲಾಗದವ ಮಯ್ಯೆಲ್ಲಾ ಪರಚಿಕೊಂಡ ಎಂಬಂತಾಗುತ್ತದೆ. ಆಯ್ಕೆ ಸಮಿತಿಯಲ್ಲಿರುವವರೇ ಪರಸ್ಪರ ದೂಷಿಸಿಕೊಂಡರೆ ಸಮಿತಿಯ ಘನತೆ ಗೌರವ ಬೀದಿ ಪಾಲಾಗುತ್ತದೆ, ಅಥವಾ ಆಯ್ಕೆ ಸಮಿತಿಯೇ ಸರಿಯಿಲ್ಲ...ಆಯ್ಕೆ ಸಮಿತಿಯಲ್ಲೂ ಒಬ್ಬರಿಗೊಬ್ಬರು ಸರಿಯಿಲ್ಲ..ಅಲ್ಲೇ ಅಪಸ್ವರವಿದೆ ಎಂದು ಪತ್ರಿಕೆಗಳು ಬೇಜವಾಬ್ದಾರಿಯುತವಾಗಿ ಬಿಂಬಿಸಿದರೆ ಅದೂ ತಪ್ಪಾಗುತ್ತದೆ. ಏಕೆಂದರೆ ಆಯ್ಕೆ ಪ್ರಕ್ರಿಯೆಯಲ್ಲಿ ಪರಸ್ಪರ ಚರ್ಚೆಗಳು ಸರ್ವೇಸಾಮಾನ್ಯ. ವಿಭಿನ್ನ ಹಿನ್ನೆಲೆಗಳಿಂದ ಬಂದ ಸದಸ್ಯರಲ್ಲಿ ಪರಸ್ಪರ ಭಿನ್ನ ಅಭಿರುಚಿ ಇರುವುದೇ ಹೊರತು ಭಿನ್ನಾಭಿಪ್ರಾಯ ಇರುವುದಿಲ್ಲ, ಹಾಗಾಗಿ ಕಾವೇರಿದ ಚರ್ಚೆ ಅಲ್ಲಿ ತೀರಾ ಸಾಮಾನ್ಯ. ಆದರೆ ಒಮ್ಮೆ ಆಯ್ಕೆಯಾಗಿ ಎಲ್ಲಾ ಸದಸ್ಯರೂ ತಮ್ಮ ಒಪ್ಪಿಗೆಯ ಸಹಿ ಮಾಡಿದ ನಂತರವೂ ಏನೋ ಮೋಸ ಆಗಿದೆಯೆಂದು ಬೊಬ್ಬೆಯಿಟ್ಟರೆ ಅದರಷ್ಟು ವಿಷಾದಕರ ಸಂಗತಿ ಮತ್ತೊಂದಿಲ್ಲ. ಆಯ್ಕೆ ಸಮಿತಿಯಲ್ಲಿ ಆಯ್ಕೆಗೂ ಮೊದಲಿರುವ ಸದಸ್ಯರ ನಡುವಿನ ಒಡಕುಗಳನ್ನು ಆಯ್ಕೆಯಾದ ನಂತರ ಪ್ರಶಸ್ತಿ ವಂಚಿತರು ಬೇರೆ ರೀತಿಯಲ್ಲಿ ದುರ್ಬಳಕೆ ಮಾಡಿಕೊಂಡರೆ ಅದೂ ವಿಷಾದಕರ ಸಂಗತಿಯೇ. ಹೀಗೆ ಪ್ರತೀ ವರ್ಷವೂ ಪ್ರಶಸ್ತಿ ವಂಚಿತ ಪಡೆ ಪ್ರಶಸ್ತಿ ಪಡೆದವರಿಗೆ ಅಭಿನಂದಿಸುವ ಔದಾರ್ಯವನ್ನು ತೋರದೆ ಅವರ ಸಂತಸವನ್ನು ನಂದಿಸುವ ಕೆಲಸ ಮಾಡುವುದಾದರೆ ಅಂಥಹ ಪ್ರಶಸ್ತಿಗಳಿಂದ ಕಲಾವಿದರಿಗೆ ಏನು ಪ್ರಯೋಜನ? ಪ್ರಶಸ್ತಿ ಯಾವ ಚಿತ್ರಕ್ಕಾಗಿ ಯಾವ ಕಾರಣಕ್ಕಾಗಿ ನೀಡಿದ್ದಾರೆ ಎಂದು ಚಿಂತಿಸದೆ..ತಮಗೆ ಪ್ರಶಸ್ತಿ ಬಂದಿಲ್ಲ ಎಂಬ ಚಿಂತೆಯಲ್ಲಿ ನ್ಯಾಯಾಲಯಕ್ಕೆ ಮೊರೆ ಹೋದರೆ ಅದರಿಂದ ಯಾವ ಪುರುಷಾರ್ಥವನ್ನು ಸಾಧಿಸಿದಂತಾಗುತ್ತದೆ? ಪಾಪ..ಪ್ರಶಸ್ತಿ ಪಡೆದವರೂ ಪಾಪ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆಂಬ ಅಪವಾದಗಳನ್ನು ಹೊತ್ತು..ಅವಮಾನಗಳಿಂದ ಬೇಸತ್ತು..ಪ್ರಶಸ್ತಿ ಬಂದ ಸಂಭ್ರಮವನ್ನೂ ಆಚರಿಸಿಕೊಳ್ಳಲಾಗದೆ ಮುಂದೇನಾಗುವುದೋ ಎಂಬ ಚಿಂತೆಯಲ್ಲಿ ದಿನ ಮುಂದೂಡಬೇಕಾಗುತ್ತದೆಯಲ್ಲವೆ? ಇದು ಕಲಾವಿದರಿಗೆ ಕಲಾವಿದರೇ ಮಾಡಿಕೊಳ್ಳುವ...ಕಲಾವಿದರಿಂದ ಕಲಾವಿದರಿಗೇ ಆಗುವ ಅನ್ಯಾಯವಲ್ಲವೇ? ಇನ್ನು ಮಾಧ್ಯಮದವರೂ ಕೂಡ ತಮ್ಮನ್ನು ತಾವು ಶೋಧಿಸಿಕೊಳ್ಳಬೇಕಾಗಿದೆ. ಜನ ನೋಡದಂತಹ..ನೋಡಲಾಗಂತಹ..ಸಿನಿಮಾ ಮಾಡಿ ಪ್ರಶಸ್ತಿಗಾಗಿಯೇ ಬರಗೆಟ್ಟು ಕುಳಿತವರ ಹಾಹಾಕಾರವನ್ನೇ ತೋರಿಸುತ್ತಾ ಆಯ್ಕೆ ಸಮಿತಿಯ ಸದಸ್ಯರಿಗೆ ಬರೆ ಎಳೆಯುವುದರ ಬದಲು ಪ್ರಶಸ್ತಿ ಪಡೆದವರ ಸಾಧನೆಗಳ ಬಗ್ಗೆ ಬರೆಯಬಹುದಲ್ಲ? ಅವರಿಗೇಕೆ ಪ್ರಶಸ್ತಿ ಬಂದಿದೆ ಎಂದು ಆರೋಗ್ಯಕರ ವಿಶ್ಲೇಷಣೆಗಳನ್ನು ಮಾಡಬಹುದಲ್ಲ..? ಒಟ್ಟಿನಲ್ಲಿ ಇದೊಂದು ಅನಗತ್ಯ ವಿವಾದ...ಇದರಿಂದ ಚಿತ್ರರಂಗದವರಿಗೆ ಏನಾದರೂ ಪ್ರಯೋಜನವಾಗುವುದಾ? ಚಿನ್ಮಯ ಎಂ.ರಾವ್ ಹೊನಗೋಡು

No comments:

Post a Comment